ಶಂಕರ್ಸ್ ವೀಕ್ಲಿ

	ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಹಾಸ್ಯ ಮತ್ತು ವ್ಯಂಗ್ಯಚಿತ್ರಗಳಿಗೆ ಮೀಸಲಾದ ಭಾರತದ ಅತ್ಯಂತ ಜನಪ್ರಿಯ ವಾರಪತ್ರಿಕೆ. ಇದನ್ನು ಕೆ. ಶಿವಶಂಕರ್ ಪಿಳ್ಳೆ ಅವರು 1948 ಮೇ 23ರಂದು ನವದೆಹಲಿಯಲ್ಲಿ ಆರಂಭಿಸಿದರು. ಇವರೇ ಈ ಪತ್ರಿಕೆಯ ಸಂಸ್ಥಾಪಕ ಸಂಪಾದಕರು. ಜವಾಹರಲಾಲ್ ನೆಹರೂ ಇದರ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಿದರು. ರಾಜಕೀಯ ವಿಡಂಬನೆ ಹಾಗೂ ಪರಿಹಾಸ್ಯ ಈ ಪತ್ರಿಕೆಯ ಪ್ರಧಾನ ಗುರಿ. ಈ ಪತ್ರಿಕೆಯನ್ನು ಪ್ರಪಂಚದ ಶ್ರೇಷ್ಠ ಹಾಸ್ಯ ನಿಯತಕಾಲಿಕ ಬ್ರಿಟಿನ್‍ನ ಪಂಚ್‍ಗೆ ಹೋಲಿಸಲಾಗುತ್ತದೆ. ಈ ಪತ್ರಿಕೆ ಭಾರತದ ಪಂಚ್ ಎಂದೇ ಪ್ರಸಿದ್ಧವಾಗಿದೆ.

	ಭಾರತದಲ್ಲಿ ವ್ಯಂಗ್ಯಚಿತ್ರಕ್ಕೆ ವೃತ್ತಿಪರತೆ, ಮನ್ನಣೆ ಮತ್ತು ಜನಪ್ರಿಯತೆ ತಂದುಕೊಟ್ಟ ಕೀರ್ತಿ ಈ ವಾರಪತ್ರಿಕೆಗೆ ಸಲ್ಲುತ್ತದೆ. ದಿನಪತ್ರಿಕೆಗಳಲ್ಲಿಯೂ ವ್ಯಂಗ್ಯಚಿತ್ರದ ಬೆಳೆವಣಿಗೆಗೆ ಭದ್ರಬುನಾದಿ ಹಾಕಿದ ಹೆಗ್ಗಳಿಕೆ ಈ ಪತ್ರಿಕೆಯದು. ಈ ಹಾಸ್ಯ ವಾರಪತ್ರಿಕೆಯನ್ನು ಪ್ರಾರಂಭಮಾಡುವ ಮೊದಲು ಶಂಕರ್‍ಪಿಳ್ಳೆಯವರು ತಮ್ಮ ವ್ಯಂಗ್ಯಚಿತ್ರಗಳಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷ್ ವೈಸ್‍ರಾಯ್‍ಗಳ ಹಾಗೂ ರಾಜಕೀಯ ಧುರೀಣರ ಪ್ರಶಂಸೆಗೆ ಪಾತ್ರರಾಗಿದ್ದರು. 30ರ ದಶಕದಲ್ಲೇ ವಿದೇಶಿ ಕಲಾಶಾಲೆಗಳಲ್ಲಿ ಆಧುನಿಕ ವ್ಯಂಗ್ಯಚಿತ್ರಗಳ ತಂತ್ರವನ್ನು ಅಧ್ಯಯನ ಮಾಡಿದ ಇವರು ಕೇರಳದ ಕಾಯಮ್‍ಕುಲಂ ಎಂಬಲ್ಲಿ 1902 ಜುಲೈ 31ರಂದು ಜನಿಸಿದರು. ವ್ಯಂಗ್ಯಚಿತ್ರ ರಚನೆಯನ್ನು ಹವ್ಯಾಸವನ್ನಾಗಿಟ್ಟು ಕೊಂಡಿದ್ದರು. ಅಂದಿನ ಪ್ರತಿಷ್ಠಿತ ಪತ್ರಿಕೆಗಳಾದ ಬಾಂಬೆ ಕ್ರಾನಿಕಲ್ ಮತ್ತು ಫ್ರೀ ಪ್ರೆಸ್ ಜರ್ನಲ್‍ಗಳಲ್ಲಿ ಕಾರ್ಯನಿರ್ವಹಿಸಿ 1932ರಲ್ಲಿ ಹಿಂದೂಸ್ಥಾನ್ ಟೈಮ್ಸ್ ಆಂಗ್ಲ ದಿನಪತ್ರಿಕೆ ಸೇರಿದ ಇವರು ತಮ್ಮ ವ್ಯಂಗ್ಯಚಿತ್ರಗಳಿಂದ ಅಪಾರ ಜನಮನ್ನಣೆ ಗಳಿಸಿದರು.

	ಸುಮಾರು ಮೂರುದಶಕಗಳ ತನಕ ಈ ವಾರಪತ್ರಿಕೆಯನ್ನು ನಿರಂತರವಾಗಿ ಸಂಪಾದಿಸಿದ್ದು ಒಂದು ದಾಖಲೆಯೆಂದೆ ಹೇಳಬಹುದು. ಈ ಪತ್ರಿಕೆ ಸುಮಾರು 10 ಸಾವಿರ ಪ್ರಸಾರದ ಸಂಖ್ಯೆಯನ್ನು ಹೊಂದಿತ್ತು. ಈ ಪತ್ರಿಕೆ ಸು. 24 ಪುಟಗಳನ್ನು ಒಳಗೊಂಡಿರುತ್ತಿತ್ತು. ಪ್ರಾರಂಭದಲ್ಲಿ ಪ್ರತಿ ಸಂಚಿಕೆಗೆ 50ಪೈಸೆ ಇತ್ತು. ಸೃಜನಶೀಲತೆಗೆ ಹೆಸರಾಗಿದ್ದ ಈ ವಿಡಂಬನ ಪತ್ರಿಕೆ 27 ವರ್ಷಗಳ ಅನಂತರ ಭಾರತದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1975 ಆಗಸ್ಟ್ 31ರಂದು ನಿಂತುಹೋಯಿತು.

ಭಾರತದ ಮೊದಲ ತಲೆಮಾರಿನ ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ. ಲಕ್ಷ್ಮಣ್, ಅಬು ಅಬ್ರಾಹಾಂ, ಎನ್.ಕೆ.ರಂಗಾ, ಬಿ.ವಿ. ವಿಜಯನ್, ಎಸ್.ಕುಟ್ಟಿ, ವಿ. ಸಾಮ್ಯುಯಲ್, ಕೇರಳವರ್ಮಾ, ಮಿಕ್ಕೀ ಪಟೇಲ್ ಮೊದಲಾದವರು ತಮ್ಮ ವೃತ್ತಿಜೀವನವನ್ನು ಶಂಕರ್ಸ್‍ವೀಕ್ಲಿ ಯಿಂದ ಪ್ರಾರಂಭಿಸಿದವರು. ಈ ಪತ್ರಿಕೆ ಹಾಸ್ಯಕ್ಕೆ ಒಂದು ಮಾನದಂಡವಾಗಿತ್ತು. ಆರೋಗ್ಯಕರವಾದ, ಆಹ್ಲಾದಕರವಾದ ಹಾಗೂ ಉಲ್ಲಾಸಭರಿತ ಹಾಸ್ಯವನ್ನೂ ಈ ಪತ್ರಿಕೆ ನೀಡುತ್ತಿತ್ತು. ಜಗತ್ತಿನ ಬಹುಪಾಲು ಪ್ರಸಿದ್ಧ ವ್ಯಕ್ತಿಗಳೆಲ್ಲರ ವ್ಯಂಗ್ಯಚಿತ್ರಗಳು ಈ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು.

	ಮಕ್ಕಳ ಸೃಜನಶೀಲತೆಯನ್ನು ಬೆಳಕಿಗೆ ತರುವ ಉದ್ದೇಶ ಹೊಂದಿದ್ದ ಶಂಕರ್‍ಪಿಳ್ಳೆ ಅವರು 1949ರಲ್ಲಿ ಶಂಕರ್ಸ್‍ವೀಕ್ಲಿ ಆಶ್ರಯದಡಿ ಶಂಕರ್ಸ್ ಅಂತಾರಾಷ್ಟ್ರೀಯ ಮಕ್ಕಳ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ಇಂದಿಗೂ ವಿಶ್ವದ 130 ದೇಶಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಮಕ್ಕಳು ಸ್ಪರ್ಧಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಜವಾಹರಲಾಲ್ ನೆಹರೂರವರೆ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದುದು (1949-63) ಈ ಪತ್ರಿಕೆಯ ಪ್ರತಿಷ್ಠೆಗೆ ಸಾಕ್ಷಿಯಾಗಿತ್ತು.

	ಈ ಪತ್ರಿಕೆಯ ಸಂಪಾದಕರಾದ ಶಂಕರಪಿಳ್ಳೆಯವರಿಗೆ ಪದ್ಮಶ್ರೀ (1956), ಪದ್ಮ ಭೂಷಣ (1966), ಪದ್ಮ ವಿಭೂಷಣ (1976) ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭ್ಯವಾಗಿದ್ದವು. ಇವರು 1989 ಡಿಸೆಂಬರ್ 26ರಂದು ನಿಧನಹೊಂದಿದರು.
											(ಎನ್.ಯು.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ